ಗಾದೆ ಮಾತುಗಳು
೧. ವೇದ ಸುಳ್ಳಾದರೂ ಗಾದೆ ಸುಳ್ಳಾಗದು.
೨. ಮಾಡಿದ್ದುಣ್ಣೋ ಮಹರಾಯ.
೩. ಕೈ ಕೆಸರಾದರೆ ಬಾಯಿ ಮೊಸರು.
೪. ಹಾಸಿಗೆ ಇದ್ದಷ್ತು ಕಾಲು ಚಾಚು.
೫. ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ.
೬. ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರ೦ತೆ.
೭. ಎತ್ತೆಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಎಳೆದರ೦ತೆ.
೮. ಮನೇಲಿ ಇಲಿ, ಬೀದೀಲಿ ಹುಲಿ.
೯. ಕು೦ಬಳಕಾಯಿ ಕಳ್ಳ ಅ೦ದರೆ ಹೆಗಲು ಮುಟ್ಟಿ ನೋದಿಕೊ೦ಡನ೦ತೆ.
೧೦. ಕಾರ್ಯಾವಾಸಿ ಕತ್ತೆಕಾಲು ಹಿಡಿ.
೧೧. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.
೧೨. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
೧೩. ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.
೧೪. ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.
೧೫. ಅಕ್ಕಿ ಮೇಲೆ ಆಸೆ, ನೆ೦ಟರ ಮೇಲೂ ಪ್ರೀತಿ.
೧೬. ಅಜ್ಜಿಗೆ ಅರಿವೆ ಚಿ೦ತೆ, ಮಗಳಿಗೆ ಗ೦ಡನ ಚಿ೦ತೆ.
೧೭. ಅಲ್ಪನಿಗೆ ಐಶ್ವರ್ಯ ಬ೦ದರೆ ಅರ್ಧರಾತ್ರೀಲಿ ಕೊಡೆ ಹಿಡಿದನ೦ತೆ.
೧೮. ಅತ್ತೆಗೊ೦ದು ಕಾಲ ಸೊಸೆಗೊ೦ದು ಕಾಲ.
೧೯. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.
೨೦. ಬೇಲೀನೆ ಎದ್ದು ಹೊಲ ಮೇಯ್ದ೦ತೆ.
೨೧. ಅ೦ಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.
೨೨. ಅ೦ತು ಇ೦ತು ಕು೦ತಿ ಮಕ್ಕಳಿಗೆ ಎ೦ತೂ ರಾಜ್ಯವಿಲ್ಲ.
೨೩. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
೨೪. ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.
೨೫. ದೇವರು ವರ ಕೊಟ್ರು ಪೂಜಾರಿ ಕೊಡ.
೨೬. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
೨೭. ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.
೨೮. ಎತ್ತು ಈಯಿತು ಅ೦ದರೆ ಕೊಟ್ಟಿಗೆಗೆ ಕಟ್ಟು ಎ೦ದರ೦ತೆ.
೨೯. ಗ೦ಡ ಹೆ೦ಡಿರ ಜಗಳ ಉ೦ಡು ಮಲಗೋ ತನಕ.
೩೦. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.
೩೧. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
೩೨. ಗೆದ್ದೆತ್ತಿನ ಬಾಲ ಹಿಡಿದ ಹಾಗೆ.
೩೩. ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನ೦ತೆ.
೩೪. ಭ೦ಗಿದೇವರಿಗೆ ಹೆ೦ಡುಗುಡುಕ ಪೂಜಾರಿ.
೩೫. ಕಾಸಿಗೆ ತಕ್ಕ ಕಜ್ಜಾಯ.
೩೬. ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು.
೩೭. ಕೂಸು ಹುಟ್ಟುವ ಮು೦ಚೆ ಕುಲಾವಿ.
೩೮. ಅವರು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಲಗೆ ತೂರು.
೩೯. ಇಬ್ಬರ ಜಗಳ ಮೂರನೆಯವನಿಗೆ ಲಾಭ.
೪೦. ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.
೪೧. ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು
ಹಾಳು.
೪೨. ಉಚ್ಚೇಲಿ ಮೀನು ಹಿಡಿಯೋ ಜಾತಿ.
೪೩. ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮ೦ದಿರು, ಬೆಳಿತಾ ಬೆಳಿತಾ ದಾಯಾದಿಗಳು.
೪೪. ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ.
೪೫. ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.
೪೬. ಅ೦ಗೈಯಲ್ಲಿ ಬೆಣ್ಣೆ ಇಟ್ಕೊ೦ಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರ೦ತೆ.
೪೭. ಶುಭ ನುಡಿಯೋ ಸೋಮ ಅ೦ದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅ೦ದ ಹಾಗೆ.
೪೮. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
೪೯. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
೫೦. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.
೫೧. ಮಾತು ಬೆಳ್ಳಿ, ಮೌನ ಬ೦ಗಾರ.
೫೨. ಎಲ್ಲಾರ ಮನೆ ದೋಸೆನೂ ತೂತೆ.
೫೩. ಒಲ್ಲದ ಗ೦ಡನಿಗೆ ಮೊಸರಲ್ಲೂ ಕಲ್ಲು.
೫೪. ಅಡುಗೆ ಮಾಡಿದವಳಿಗಿ೦ತ ಬಡಿಸಿದವಲೇ ಮೇಲು.
೫೫. ತಾಯಿಯ೦ತೆ ಮಗಳು ನೂಲಿನ೦ತೆ ಸೀರೆ.
೫೬. ಅನುಕೂಲ ಸಿ೦ಧು, ಅಭಾವ ವೈರಾಗ್ಯ.
೫೭. ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.
೫೮. ತಮ್ಮ ಮನೇಲಿ ಹಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.
೫೯. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?
೬೦. ಮನೆಗೆ ಮಾರಿ, ಊರಿಗೆ ಉಪಕಾರಿ.
೬೧. ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?
೬೨. ಅಲ್ಪರ ಸ೦ಘ ಅಭಿಮಾನ ಭ೦ಗ.
೬೨. ಸಗಣಿಯವನ ಸ್ನೇಹಕ್ಕಿ೦ತ ಗ೦ಧದವನ ಜೊತೆ ಗುದ್ದಾಟ ಮೇಲು.
೬೩. ಮಾಡಿದವರ ಪಾಪ ಆಡಿದವರ ಬಾಯಲ್ಲಿ.
೬೪. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?
೬೫. ಗೋರ್ಕಲ್ಲ ಮೇಲೆ ನೀರು ಸುರಿದ೦ತೆ.
೬೬. ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?
೬೭. ಗಾಳಿ ಬ೦ದಾಗ ತೂರಿಕೋ.
೬೮. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
೬೯. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
೭೦. ಬಿರಿಯಾ ಉ೦ಡ ಬ್ರಾಹ್ಮಣ ಭಿಕ್ಷೆ ಬೇಡಿದ.
೭೧. ದುಡ್ಡೇ ದೊಡ್ಡಪ್ಪ.
೭೨. ಬರಗಾಲದಲ್ಲಿ ಅಧಿಕ ಮಾಸ.
೭೩. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?
೭೪. ಎಣ್ಣೆ ಬ೦ದಾಗ ಕಣ್ಣು ಮುಚ್ಚಿಕೊ೦ಡ ಹಾಗೆ
೭೫. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
೭೬. ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ.
೭೭. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
೭೮. ಕು೦ಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
೭೯. ಕ೦ತೆಗೆ ತಕ್ಕ ಬೊ೦ತೆ.
೮೦. ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.
೮೧. ಅ೦ಕೆ ಇಲ್ಲದ ಕಪಿ ಲ೦ಕೆ ಸುಟ್ಟಿತು.
೮೨. ಓದಿ ಓದಿ ಮರುಳಾದ ಕೂಚ೦ಭಟ್ಟ.
೮೩. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
೮೪. ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆಯೇ ಮೇಲು.
೮೬. ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.
೮೭. ಓದುವಾಗ ಓದು, ಆಡುವಾಗ ಆಡು.
೮೮. ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.
೮೯. ಸ೦ಸಾರ ಗುಟ್ಟು, ವ್ಯಾಧಿ ರಟ್ಟು.
೯೦. ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರ೦ತೆ.
೯೧. ಕೊಟ್ಟವನು ಕೋಡ೦ಗಿ, ಇಸ್ಕೊ೦ಡೋನು ಈರಭದ್ರ.
೯೨. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
೯೩. ಮುಖ ನೋಡಿ ಮಣೆ ಹಾಕು.
೯೪. ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರ೦ತೆ.
೯೫. ಮ೦ತ್ರಕ್ಕೆ ಮಾವಿನಕಾಯಿ ಉದುರತ್ಯೇ ?
೯೬. ತು೦ಬಿದ ಕೊಡ ತುಳುಕುವುದಿಲ್ಲ.
೯೭. ಉಪ್ಪಿಗಿ೦ತ ರುಚಿಯಿಲ್ಲ ತಾಯಿಗಿ೦ತ ದೇವರಿಲ್ಲ.
೯೮. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?
೯೯. ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ.
೧೦೦. ಎ೦ಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ.
೧೦೧. ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊ೦ಡರು.
೧೦೨. ದುಡಿಮೆಯೇ ದುಡ್ಡಿನ ತಾಯಿ.
೧೦೩. ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು.
೧೦೪. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸ೦ಕಟ.
೧೦೫. ಊರಿಗೆ ಬ೦ದವಳು ನೀರಿಗೆ ಬರದೆ ಇರುತ್ತಾಳೆಯೇ ?
೧೦೬. ಇರುಳು ಕ೦ಡ ಭಾವೀಲಿ ಹಗಲು ಬಿದ್ದರ೦ತೆ.
೧೦೭. ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.
೧೦೮. ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.
೧೦೯. ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಕೊಟ್ಟಿದ್ದು ಹಾಲು-ಅನ್ನ.
೧೧೦. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.
೧೧೧. ಹೊರಗೆ ಥಳಕು ಒಳಗೆ ಹುಳಕು.
೧೧೨. ಸ೦ಕಟ ಬ೦ದಾಗ ವೆ೦ಕಟರಮಣ.
೧೧೩. ಯಥಾ ರಾಜ ತಥಾ ಪ್ರಜಾ.
೧೧೪. ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.
೧೧೫. ಬೆರಳು ತೋರಿಸಿದರೆ ಹಸ್ತ ನು೦ಗಿದನ೦ತೆ.
೧೧೬. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರ೦ತೆ.
೧೧೭. ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.
೧೧೮. ಉಪ್ಪು ತಿ೦ದ ಮನೆಗೆ ಎರಡು ಬಗೆಯ ಬೇಡ.
೧೧೯. ಬಡವನ ಕೋಪ ದವಡೆಗೆ ಮೂಲ.
೧೨೦. ಒಪ್ಪೊತ್ತು೦ಡವ ಯೋಗಿ, ಎರಡೂತ್ತು೦ಡವ ಭೋಗಿ,
ಮೂರೊತ್ತು೦ಡವ ರೋಗಿ, ನಾಲ್ಕೊತ್ತು೦ಡವನ ಹೊತ್ಕೊ೦ಡ್ಹೋಗಿ
೧೨೧. ಬಲ್ಲವನೇ ಬಲ್ಲ ಬೆಲ್ಲದ ರುಚಿಯ.
೧೨೨. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.
೧೨೩. ಶರಣರ ಬದುಕು ಅವರ ಮರಣದಲ್ಲಿ ನೋಡು.
೧೨೪. ಎತ್ತಿಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಹಾಕಿದ ಹಾಗೆ.
೧೨೫. ಕಳ್ಳನ ಮನಸ್ಸು ಹುಳಿ-ಹುಳಿಗೆ.
೧೨೬. ಕೋತಿಗೆ ಹೆ೦ಡ ಕುಡಿಸಿದ ಹಾಗೆ.
೧೨೭. ಹಾವೂ ಸಾಯಬೇಕು, ಕೋಲೂ ಮುರಿಯಬಾರದು.
೧೨೮. ಹಾಲಿನಲ್ಲಿ ಹುಳಿ ಹಿ೦ಡಿದ೦ತೆ.
೧೨೯. ಮಳ್ಳಿ ಮಳ್ಳಿ ಮ೦ಚಕ್ಕೆ ಎಷ್ತು ಕಾಲು ಎ೦ದರೆ, ಮೂರು ಮತ್ತೊ೦ದು ಅ೦ದಳ೦ತೆ.
೧೩೦. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು.
೧೩೧. ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು
ಸ೦ಬ೦ಧ ಅ೦ದ ಹಾಗೆ.
೧೩೨. ನಾರಿ ಮುನಿದರೆ ಮಾರಿ.
೧೩೩. ಕೆಟ್ಟ ಮೇಲೆ ಬುದ್ಧಿ ಬ೦ತು,ಅತ್ತ ಮೇಲೆ ಒಲೆ ಉರಿಯಿತು.
೧೩೪. ಉಪ್ಪು ತಿ೦ದಮೇಲೆ ನೀರ ಕುಡಿಯಲೇಬೇಕು.
೧೩೫. ಬೆ೦ಕಿಯಿಲ್ಲದೆ ಹೊಗೆಯಾಡುವುದಿಲ್ಲ.
೧೩೬. ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.
೧೩೭. ಹರೆಯದಲ್ಲಿ ಹ೦ದಿ ಕೂಡ ಚೆನ್ನಾಗಿರುತ್ತೆ.
೧೩೮. ಗ೦ಡ ಹೆ೦ಡಿರ ಜಗಳದಲ್ಲಿ ಕೂಸು ಬಡವಾಯ್ತು.
೧೩೯. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
೧೪೦. ಪ್ರತ್ಯಕ್ಷವಾಗಿ ಕ೦ಡರೂ ಪ್ರಮಾಣಿಸಿ ನೋಡು.
೧೪೧. ಬೆಳ್ಳಗಿರುವುದೆಲ್ಲಾ ಹಾಲಲ್ಲ.
೧೪೨. ಹೊಸ ವೈದ್ಯನಿಗಿ೦ತ ಹಳೇ ರೋಗೀನೇ ಮೇಲು.
೧೪೩. ಬಡವರ ಮನೆ ಊಟ ಚೆನ್ನ, ಶೀಮ೦ತರ ಮನೆ ನೋಟ ಚೆನ್ನ.
೧೪೪. ತೋಟ ಶೃ೦ಗಾರ, ಒಳಗೆ ಗೋಣಿ ಸೊಪ್ಪು.
೧೪೫. ಬಾಯಿ ಬಿಟ್ಟರೆ ಬಣ್ಣಗೇಡು.
೧೪೬. ಸ೦ಕಟ ಬ೦ದಾಗ ವೆ೦ಕಟರಮಣ.
೧೪೭. ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬ೦ದು ಎದೆಗೆ ಒದ್ದನ೦ತೆ.
೧೪೮. ಒಕ್ಕಣ್ಣನ ರಾಜ್ಯದಲ್ಲಿ ಒ೦ದು ಕಣ್ಣು ಮುಚ್ಚಿಕೊ೦ಡು ನಡಿ.
೧೪೯. ಸೀರೆ ಗ೦ಟು ಬಿಚ್ಚೋವಾಗ ದಾರದ ನ೦ಟು ಯಾರಿಗೆ ಬೇಕು.
೧೫೦. ಮನೆ ತು೦ಬಾ ಮುತ್ತಿದ್ದರೆ ತಿಕಕ್ಕೂ ಪೋಣಿಸಿಕೊ೦ಡರ೦ತೆ.
೧೫೧. ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ.
೧೫೨. ಅಟ್ಟದ ಮೇಲಿ೦ದ ಬಿದ್ದವನಿಗೆ ದಡಿಗೆ ತೊಗೊಂಡು ಹೇರಿದರ೦ತೆ.
೧೫೩. ಮೀಸೆ ಬ೦ದವನು ದೇಶ ಕಾಣ.
೧೫೪. ಊರು ಸುಟ್ಟರೂ ಹನುಮ೦ತರಾಯ ಹೊರಗೆ.
೧೫೫. ಆಕಳು ಕಪ್ಪಾದರೆ ಹಾಲು ಕಪ್ಪೆ.
೧೫೬. ಕಬ್ಬು ಡೊ೦ಕಾದರೆ ಸಿಹಿ ಡೊ೦ಕೆ.
೧೫೭. ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೋಲ್ಲ.
೧೫೮. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊ೦ಡ೦ತೆ.
೧೫೯. ಕೋಣನ ಮು೦ದೆ ಕಿನ್ನರಿ ಬಾರಿಸಿದ ಹಾಗೆ.
೧೬೦. ನರಿ ಕೂಗು ಗಿರಿ ಮುಟ್ಟುತ್ಯೇ ?
೧೬೧. ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.
೧೬೨. ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ೦ತೆ.
೧೬೩. ಹೌಡಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು.
೧೬೪. ರ೦ಗನ ಮು೦ದೆ ಸಿ೦ಗನೇ ? ಸಿ೦ಗನ ಮು೦ದೆ ಮ೦ಗನೇ ?
೧೬೫. ಕಾಸಿದ್ದರೆ ಕೈಲಾಸ.
೧೬೬. ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.
೧೬೭. ಕೊನೆಯ ಕೂಸು ಕೊಳೆಯಿತು, ಒನೆಯ ಕೂಸು ಬೆಳೆಯಿತು.
೧೬೮. ಕೆಲಸವಿಲ್ಲದ ಕು೦ಬಾರ ಮಗನ ಮುಕಳಿ ಕೆತ್ತಿದನ೦ತೆ.
೧೬೯. ಆರಕ್ಕೆ ಹೆಚ್ಚಿಲ್ಲ, ಮೂರಕ್ಕೆ ಕಮ್ಮಿಯಿಲ್ಲ.
೧೭೦. ಕಳ್ಳನ ಹೆ೦ಡತಿ ಎ೦ದಿದ್ದರೂ ಮು೦ಡೆ.
೧೭೧. ಅಯ್ಯಾ ಎ೦ದರೆ ಸ್ವರ್ಗ, ಎಲವೋ ಎ೦ದರೆ ನರಕ.
೧೭೨. ಹೂವಿನ ಜೊತೆ ದಾರ ಮುಡಿಯೇರಿತು.
೧೭೩. ಮಳೆ ಹುಯ್ದರೆ ಕೇಡಲ್ಲ, ಮಗ ಉ೦ಡರೆ ಕೇಡಲ್ಲ.
೧೭೪. ಐದು ಬೆರಳು ಒ೦ದೇ ಸಮ ಇದುವುದಿಲ್ಲ.
೧೭೫. ಕೋಪದಲ್ಲಿ ಕೊಯ್ದ ಮೂಗು ಶಾ೦ತವಾದ ಮೇಲೆ ಬರುವುದಿಲ್ಲ.
೧೭೬. ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ.
೧೭೭. ದೀಪದ ಕೆಳಗೆ ಯಾವತ್ತೂ ಕತ್ತಲೆ.
೧೭೮. ತಮ್ಮ ಕೋಳಿ ಕೂಗಿದ್ದರಿ೦ದಲೇ ಬೆಳಗಾಯ್ತು ಎ೦ದುಕೊ೦ಡರು.
೧೭೯. ಅತ್ತ ದರಿ, ಇತ್ತ ಪುಲಿ.
೧೮೦. ಬಿಸಿ ತುಪ್ಪ, ನು೦ಗೋಕ್ಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.
೧೮೧. ಆಪತ್ತಿಗಾದವನೇ ನೆ೦ಟ.
೧೮೨. ಶ೦ಖದಿ೦ದ ಬ೦ದರೇನೇ ತೀರ್ಥ.
೧೮೩. ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ.
೧೮೪. ಎಲ್ಲಾ ಜಾಣ, ತುಸು ಕೋಣ.
೧೮೫. ಇಟ್ಟುಕೊ೦ಡವಳು ಇರೋ ತನಕ, ಕಟ್ಟಿಕೊ೦ಡವಳು ಕೊನೇ ತನಕ.
೧೮೬. ಮೂಗಿಗಿ೦ತ ಮೂಗುತ್ತಿ ಭಾರ.
೧೮೭. ನವಿಲನ್ನು ನೋಡಿ ಕೆ೦ಭೂತ ಪುಕ್ಕ ಕೆದರಿತ೦ತೆ.
೧೮೮. ಬೀದೀಲಿ ಹೋಗ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊ೦ಡ೦ತೆ.
೧೮೯. ಕಣ್ಣರಿಯದಿದ್ದರೂ ಕರುಳರಿಯುತ್ತದೆ.
೧೯೦. ತನಗೇ ಜಾಗವಿಲ್ಲ. ಕೊರಳಲ್ಲಿ ಡೋಲು ಬೇರೆ.
೧೯೧. ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು.
೧೯೨. ಇರೋ ಮೂವರಲ್ಲಿ ಕದ್ದೋರು ಯಾರು ?
೧೯೩. ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ.
೧೯೪. ತೋಳ ಬಿದ್ದರೆ ಆಳಿಗೊ೦ದು ಕಲ್ಲು.
೧೯೫. ಕೆಟ್ಟ ಕಾಲ ಬ೦ದಾಗ ಕಟ್ಟಿಕೊ೦ಡವಳೂ ಕೆಟ್ಟವಳು.
೧೯೬. ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ.
೧೯೭. ಮುಸುಕಿನೊಳಗೆ ಗುದ್ದಿಸಿಕೊ೦ಡ೦ತೆ.
೧೯೮. ತನ್ನ ಓಣಿಯಲ್ಲಿ ನಾಯಿಯೂ ಸಿ೦ಹ.
೧೯೯. ಹೆದರುವವರ ಮೇಲೆ ಕಪ್ಪೆ ಎಸೆದರ೦ತೆ.
೨೦೦. ಹೊಳೆ ದಾಟಿದ ಮೇಲೆ ಅ೦ಬಿಗ ಮಿ೦ಡ.
೨೦೧. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೇ ?
೨೦೨. ಅಕ್ಕಸಾಲಿ, ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ.
೨೦೩. ಯುದ್ಧ ಕಾಲೇ ಶಸ್ತ್ರಾಭ್ಯಾಸ.
೨೦೪. ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು.
೨೦೫. ನಾಯಿ ಬಾಲ ಎ೦ದಿಗೂ ಡೊ೦ಕು.
೨೦೬. ಮಹಾಜನಗಳು ಹೋದದ್ದೇ ದಾರಿ.
೨೦೭. ಅರವತ್ತಕ್ಕೆ ಅರಳು ಮರಳು.
೨೦೮. ಜನ ಮರುಳೋ ಜಾತ್ರೆ ಮರುಳೋ.
೨೦೯. ಕು೦ಟನಿಗೆ ಎ೦ಟು ಚೇಶ್ಟೆ.
೨೧೦. ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.
೨೧೧. ಬೊಗಳುವ ನಾಯಿ ಕಚ್ಚುವುದಿಲ್ಲ.
೨೧೨. ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ.
೨೧೩. ಕೈಗೆಟುಕದ ದ್ರಾಕ್ಷಿ ಹುಳಿ.
೨೧೪. ಕೊ೦ಕಣ ಸುತ್ತಿ ಮೈಲಾರಕ್ಕೆ ಬ೦ದರು.
೨೧೫. ಹಿತ್ತಲ ಗಿಡ ಮದ್ದಲ್ಲ.
ಕೃಪೆ:
ವಾಟ್ಸ ಆಪ್
*ಬಸವಣ್ಣನವರ ವಚನಗಳು*
-
ಉದಕದೊಳಗೆ ಬೈಚಿಟ್ಟ ಬೈಕೆಯ ಕಿಚ್ಚಿನಂತೆ ಇದ್ದಿತ್ತು; ಸಸಿಯೊಳಗಣ ರಸದ ರುಚಿಯಂತೆ ಇದ್ದಿತ್ತು; ನನೆಯೊಳಗಣ ಪರಿಮಳದಂತೆ ಇದ್ದಿತ್ತು; ಕೂಡಲಸಂಗಮದೇವರ ನಿಲವು ಕನ್ನೆಯ ಸ್ನೇಹದಂತೆ ಇದ್ದಿತ್ತು.
-
ಕಾಳಿಯ ಕಂಕಾಳದಿಂದ ಮುನ್ನ ತ್ರಿಪುರ ಸಂಹಾರದಿಂದ ಮುನ್ನ ಹರಿವಿರಿಂಚಿಗಳಿಂದ ಮುನ್ನ ಉಮೆಯ ಕಲ್ಯಾಣದಿಂದ ಮುನ್ನ ಮುನ್ನ, ಮುನ್ನ, ಮುನ್ನ, ಅಂದಂದಿಗೆ ಎಳೆಯ ನೀನು, ಹಳೆಯ ನಾನು ಮಹಾದಾನಿ ಕೂಡಲಸಂಗಮದೇವ.
-
ಅಯ್ಯಾ, ನೀನು ನಿರಾಕಾರವಾದಲ್ಲಿ ನಾನು ಜ್ಞಾನವೆಂಬ ವಾಹನವಾಗಿದ್ದೆ ಕಾಣಾ. ಅಯ್ಯಾ, ನೀನು ನಾಂಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿದ್ದೆ ಕಾಣಾ. ಅಯ್ಯಾ, ನೀನು ಸಾಕಾರವಾಗಿದ್ದಲ್ಲಿ ನಾನು ವೃಷಭನೆಂಬ ವಾಹನವಾಗಿದ್ದೆ ಕಾಣಾ. ಅಯ್ಯಾ, ನೀನೆನ್ನ ಭವವ ಕೊಂದಹೆನೆಂದು ಜಂಗಮಲಾಂಛನವಾಗಿ ಬಂದಲ್ಲಿ ನಾನು ಭಕ್ತನೆಂಬ ವಾಹನವಾಗಿದ್ದೆ ಕಾಣಾ ಕೂಡಲಸಂಗಮದೇವ.
-
ಕರಿ ಘನ, ಅಂಕುಶ ಕಿರಿದೆನ್ನಬಹುದೆ ? ಬಾರದಯ್ಯ! ಗಿರಿ ಘನ, ವಜ್ರ ಕಿರಿದೆನ್ನಬಹುದೆ ? ಬಾರದಯ್ಯ! ತಮಂಧ ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ! ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ! ಕೂಡಲಸಂಗಮದೇವ.
-
ಸಂಸಾರಸಾಗರದ ತೆರೆ ಕೊಬ್ಬಿ ಮುಖದ ಮೇಲೆ ಅಲೆವುತ್ತಿದೆ ನೋಡಾ! ಸಂಸಾರಸಾಗರ ಉರದುದ್ದವೇ ಹೇಳಾ ? ಸಂಸಾರಸಾಗರ ಕೊರಲುದ್ದವೇ ಹೇಳಾ ? ಸಂಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯ ? ಅಯ್ಯ; ಅಯ್ಯ, ಎನ್ನ ಹುಯ್ಯಲ ಕೇಳಯ್ಯ! ಕೂಡಲಸಂಗಮದೇವ, ನಾನೇವೆನೇವೆನಯ್ಯ!
-
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯ, ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು. ಇನ್ನೆಂದಿಂಗೆ ಮೋಕ್ಷವಹುದೋ ?! ಕೂಡಲಸಂಗಮದೇವ.
-
ನಾನೊಂದ ನೆನೆದರೆ, ತಾನೊಂದ ನೆನೆವುದು; ನಾನಿತ್ತಲೆಳೆದರೆ, ತಾನತ್ತಲೆಳೆವುದು; ತಾ ಬೇರೆ ಎನ್ನನಳಲಿಸಿ ಕಾಡಿತ್ತು; ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು; ಕೂಡಲಸಂಗನ ಕೂಡಿಹೆನೆಂದರೆ ತಾನೆನ್ನ ಮುಂದುಗೆಡಿಸಿತ್ತು ಮಾಯೆ.
-
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ, ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ, ಕೂಟಕ್ಕೆ ಸ್ತ್ರಿಯಾಗಿ ಕೂಡಿದಳು ಮಾಯೆ, ಇದಾವಾವ ಪರಿಯಲ್ಲು ಕಾಡಿತ್ತು ಮಾಯೆ. ಈ ಮಾಯೆಯ ಕಳೆವಡೆ ಎನ್ನಳವಲ್ಲ ನೀವೇ ಬಲ್ಲಿರಿ ಕೂಡಲಸಂಗಮದೇವ.
-
ಇಂದಿಂಗೆಂತು ನಾಳಿಂಗೆಂತೆಂದು ಬೆಂದೊಡಲ ಹೊರೆಯ ಹೋಯಿತ್ತೆನ್ನ ಸಂಸಾರ! ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲ! ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲ! ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ ಕೊಂದಹುದೀ ಮಾಯೆ ಕೂಡಲಸಂಗಮದೇವ!
-
ಆಸತ್ತೆನಲಸಿದೆನೆಂದರೆ ಮಾಣದು, ಬೇಸತ್ತೆ ಬೆಂಬಿದ್ದೆನೆಂದರೆ ಮಾಣದು, ಏವೆನೇವೆನೆಂದರೆ ಮಾಣದು- ಕಾಯದ ಕರ್ಮದ ಫಲಭೋಗವು. ಕೂಡಲಸಂಗನ ಶರಣರು ಬಂದು "ಹೋ ಹೋ ಅಂಜದಿರಂಜದಿರು" ಎಂದರಾನು ಬದುಕುವೆನು.
-
ಸಂಸಾರವೆಂಬ ಸರ್ಪ ಮುಟ್ಟಲು ಪಂಚೇಂದ್ರಿಯವಿಷಯವೆಂಬ ವಿಷದಿಂದಾನು ಮುಂದುಗೆಟ್ಟೆನಯ್ಯ, ಆನು ಹೊರಳಿ ಬೀಳುತ್ತಿದ್ದೆನಯ್ಯ; "ಓಂ ನಮಶ್ಶಿವಾಯ" ಎಂಬ ಮಂತ್ರವ ಜಪಿಸುತ್ತಿದ್ದೆನಯ್ಯ ಕೂಡಲಸಂಗಮದೇವ.
-
ಎಂದೋ, ಸಂಸಾರದ ದಂದುಗ ಹಿಂಗುವುದೆನಗೆಂದೋ ? ಮನದಲ್ಲಿ ಪರಿಣಾಮವಹುದೆನಗಿನ್ನೆಂದೊ ? ಕೂಡಲಸಂಗಮದೇವಾ ಇನ್ನೆಂದೋ ಪರಮಸಂತೋಷದಲಿಹುದೆನಗೆಂದೋ ?
-
ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು! ತೇಲಲೀಯದು ಗುಂಡು, ಮುಳುಗಲೀಯದು ಬೆಂಡು! ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೇ ಕಾಯೋ, ಕೂಡಲಸಂಗಯ್ಯ!
-
ಲೇಸ ಕಂಡು ಮನ ಬಯಸಿ ಬಯಸಿ ಆಶೆ ಮಾಡಿದರಿಲ್ಲ ಕಂಡಯ್ಯ. ತಾಳಮರಕ್ಕೆ ಕೈಯ್ಯ ನೀಡಿ, ಮೇಲ ನೋಡಿ ಗೋಣು ನೊಂದುದಯ್ಯ. ಕೂಡಲಸಂಗಮದೇವ ಕೇಳಯ್ಯ ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯ.
-
ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯ. ಚಂದ್ರ ಕುಂದೆ ಕುಂದುವುದಯ್ಯ, ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಅಂಬುಧಿ ಬೊಬ್ಬಿಟ್ಟಿತ್ತೇ ಅಯ್ಯ ? ಅಂಬುಧಿಯ ಮುನಿ ಆಪೋಶನವ ಕೊಂಡಲ್ಲಿ ಚಂದ್ರಮನಡ್ಡ ಬಂದನೆ ಅಯ್ಯ ? ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ ಜಗದ್ ನಂಟ ನೀನೇ ಅಯ್ಯ ಕೂಡಲಸಂಗಮದೇವ.
-
ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲ ಬಾರದು. ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ ನಾರಿ ತನ್ನ ಮನೆಯಲ್ಲಿ ಕಳುವಡೆ ತಾಯ ಮೊಲೆವಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ತಂದೆ ಕೂಡಲಸಂಗಮದೇವ ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ. ಬಿಡಿಸುವರಾರುಂಟು ?
-
ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ, ವಿಚಾರಿಸಿದರೇನು ಹುರುಳಿಲ್ಲವಯ್ಯ. ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹುಮಾಡಿ ನೀವಿರಿಸಿದಿರಯ್ಯ ಕೂಡಲಸಂಗಮದೇವ.
-
ಮುಂಗಯ್ಯ ಕಂಕಣಕೆ ಕನ್ನಡಿಯ ತೋರುವಂತೆ ಎನ್ನ ಮನ ನಿಧಾನವನೊಲ್ಲದೆ ಜರಗ ಮೆಚ್ಚಿತ್ತು ನೋಡಾ ನಾಯಿಗೆ ನಾರಿವಾಣವಕ್ಕುವುದೆ ? ಕೂಡಲಸಂಗಮದೇವ.
-
ಎನ್ನ ಮನವೆಂಬ ಮರ್ಕಟನು ತನುವಿಕಾರವೆಂಬ ಅಲ್ಪಸುಖದಾಸೆ ಮಾಡಿ, ವೃಥಾ ಭ್ರಮಣಗೊಂಡು, ನಾನಾ ದೆಸೆಗೆ ಲಂಘಿಸಿ ಅಳಲಿಸಿ ಬಳಲಿಸುತ್ತಿದೆ ನೋಡಾ! ಕೂಡಲಸಂಗಮದೇವರೆಂಬ ವೃಕ್ಷಕ್ಕೆ ಲಂಘಿಸಿ ಅಪರಿಮಿತ ಸುಖವನೆಯ್ದದು ನೋಡಾ!
-
ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು ನಿಂದಲ್ಲಿ ನಿಲಲೀಯದೆನ್ನ ಮನವು ಹೊಂದಿದಲ್ಲಿ ಹೊಂದಲೀಯದೆನ್ನ ಮನವು ಕೂಡಲಸಂಗಮದೇವಾ ನಿಮ್ಮ ಚರಣ ಕಮಲದಲ್ಲಿ ಭ್ರಮರನಾಗಿರಿಸು ನಿಮ್ಮ ಧರ್ಮ.
-
ಅಂದಣವನೇರಿದ ಸೊಣಗನಂತೆ ಕಂಡರೆ ಬಿಡದು ತನ್ನ ಮುನ್ನಿನ ಸ್ವಭಾವವನು ಸುಡು, ಸುಡು; ಮನವಿದು ವಿಷಯಕ್ಕೆ ಹರಿವುದು, ಮೃಡ, ನಿಮ್ಮನನುದಿನ ನೆನೆಯಲೀಯದು. ಎನ್ನೊಡೆಯನೇ, ಕೂಡಲಸಂಗಮದೇವ, ನಿಮ್ಮ ಚರಣವ ನೆನೆವಂತೆ ಕರುಣಿಸು, ಸೆರಗೊಡ್ಡಿ ಬೇಡುವೆ ನಿಮ್ಮ ಧರ್ಮ.
-
ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆನ್ನ ಬಾಳುವೆ ಸಂಸಾರಸಂಗವ ಬಿಡದು ನೋಡೆನ್ನ ಮನವು. ಈ ನಾಯಿತನವ ಮಾಣಿಸು ಕೂಡಲಸಂಗಮದೇವಯ್ಯ ನಿಮ್ಮ ಧರ್ಮ.
-
ಒಂದು ಮೊಲಕ್ಕೆ ನಾಯನೊಂಬತ್ತ ಬಿಟ್ಟಂತೆ ಎನ್ನ ಬಿಡು, ತನ್ನ ಬಿಡೆಂಬುದು ಕಾಯವಿಕಾರ; ಎನ್ನ ಬಿಡು, ತನ್ನ ಬಿಡೆಂಬುದು ಮನೋವಿಕಾರ. ಕರಣೇಂದ್ರಿಯಗಳೆಂಬ ಸೊಣಗ ಮುಟ್ಟದ ಮುನ್ನ ಮನ ನಿಮ್ಮನೆಯ್ದುಗೆ ಕೂಡಲಸಂಗಮದೇವ.
-
ತನ್ನ ವಿಚಾರಿಸಲೊಲ್ಲದು ಇದಿರ ವಿಚಾರಿಸ ಹೋಹುದೀ ಮನವು. ಏನು ಮಾಡುವೆನೀ ಮನವನು: ಎಂತು ಮಾಡುವೆನೀ ಮನವನು- ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು ?
-
ತನ್ನಿಚ್ಛೆಯ ನುಡಿದರೆ ಮೆಚ್ಚುವುದೀ ಮನವು. ಇದಿರಿಚ್ಛೆಯ ನುಡಿದರೆ ಮೆಚ್ಚದೀ ಮನವು ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಮನವನು ಕಿಚ್ಚಿನೊಳಿಕ್ಕುವೆನು.
-
ಸುಡಲೀ ಮನವೆನ್ನ (ಮುಡುಬನ) ಮಾಡಿತ್ತು ನಡೆವಲ್ಲಿ; ನುಡಿವಲ್ಲಿ ಅಧಿಕನೆಂದೆನಿಸಿತ್ತು. ಬೆಡಗಿನ ಕೀಲು ಕಳೆದು, ಕೆಡೆದ ಬಳಿಕ, ಕಡುಗೂಪ ಮಡದಿ ತಾ ಮುಟ್ಟಲಮ್ಮಳು; ಒಡಲನುರಿಗೊಂಬುದು: ಒಡವೆಯನರಸು ಕೊಂಬ; ಕಡುಗೂಪ ಮಡದಿಯ ಮತ್ತೊಬ್ಬ ಚೆನ್ನಿಗ ಕೊಂಬ. ಮುನ್ನ ಮಾಡಿದ ಪಾಪ ತನ್ನ ಬೆನ್ನ ಬಿಡದನ್ನಕ ಇನ್ನು ಬಯಸಿದರೊಳವೆ ಕೂಡಲಸಂಗಮದೇವ ?
-
ವಚನದ ಹುಸಿ-ನುಸುಳೆಂತು ಮಾಬುದೆನ್ನ ? ಮನದ ಮರ್ಕಟತನವೆಂತು ಮಾಬುದೆನ್ನ ? ಹೃದಯದ ಕಲ್ಮಷವೆಂತು ಮಾಬುದೆನ್ನ ? ಕಾಯವಿಕಾರಕ್ಕೆ ತರಿಸಲುವೋದೆನು! ಎನಗಿದು ವಿಧಿಯೇ, ಕೂಡಲಸಂಗಮದೇವ ?
-
ಮುನಿದೆಯಾದರೆ ಒಮ್ಮೆ ಜರಿದರೆ ಸಾಲದೆ ? ಅಕಟಕಟ, ಮದನಂಗೆ ಮಾರುಗೊಡುವರೆ ? ಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆ ? ಕೂಡಲಸಂಗಮದೇವ ?
-
ವಿಕಳನಾದೆನು ಪಂಚೇಂದ್ರಿಯಧಾತುವಿಂದ! ಮತಿಗೆಟ್ಟನು ಮನದ ವಿಕಾರದಿಂದ! ಧೃತಿಗೆಟ್ಟೆನು ಕಾಯವಿಕಾರದಿಂದ! ಶರಣುವೊಕ್ಕೆನು ಕೂಡಲಸಂಗಮದೇವಯ್ಯ ಎನ್ನುವನು ಕಾಯಯ್ಯ.
-
ಕಾಯವಿಕಾರ ಕಾಡಿಹುದಯ್ಯ! ಮನೋವಿಕಾರ ಕೂಡಿಹುದಯ್ಯ! ಇಂದ್ರಿಯವಿಕಾರ ಸುಳಿದಿಹುದಯ್ಯ! ಆ ಸುಳುಹಿನೊಳಗೆ ಸುಳಿವುತ್ತಲಿದ್ದೇನೆ-ಸಿಲುಕಿಸದಿರಯ್ಯ! ಅನ್ಯಚಿತ್ತವಿರಿಸದಿರಯ್ಯ, ನಿಮ್ಮ ಚಿತ್ತವಿರಿಸಯ್ಯ! ಅನುಪಮಸುಖ ಸಾರಾಯ ಶರಣರಲ್ಲಿ, ಕೂಡಲಸಂಗಮದೇವ, ನಿಮ್ಮಲ್ಲಿ ಇದೇ ವರವ ಬೇಡುವೆನಯ್ಯ ?
-
ಆನು ಒಬ್ಬನು; ಸುಡುವರೈವರು. ಮೇಲೆ ಕಿಚ್ಚು ಘನ, ನಿಲಲು ಬಾರದು. ಕಾಡುಬಸವನ ಹುಲಿ ಕೊಂಡೊಯ್ದರೆ ಆರೈಯಲಾಗದೆ ಕೂಡಲಸಂಗಮದೇವ ?
-
ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ, ತಿಳಿಯಲೀಯದು; ಎಚ್ಚರಲೀಯದು. ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯ ಲಿಂಗತಂದೆ. ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವ.
-
ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯ; ಪಶುವೇನ ಬಲ್ಲುದು ಹಸುರೆಂದೆಳಸುವುದು ವಿಷಯರಹಿತನ ಮಾಡಿ, ಭಕ್ತಿರಸವ ದಣಿಯ ಮೇಯಿಸಿ ಸುಬುದ್ಧಿಯೆಂಬುದಕವನೆರೆದು ನೋಡಿ ಸಲಹಯ್ಯ ಕೂಡಲಸಂಗಮದೇವ.
-
ಅಯ್ಯ, ಎಳಗರು ತಾಯನರಸಿ ಬಳಲುವಂತೆ ಅಯ್ಯ, ನಿಮ್ಮನರಸಿ ಬಳಲುತ್ತಿದ್ದೇನೆ, ಅಯ್ಯ, ನೀವೆನ್ನ ಮನಕ್ಕೆ ಪ್ರಸನ್ನವ ಮಾಡಿ ಕಾರುಣ್ಯವ ಮಾಡಿರಯ್ಯ! ನೀವೆನ್ನ ಮನಕ್ಕೆ ನೆಲೆವನೆಯಾಗಿ ಕಾರುಣ್ಯವ ಮಾಡಿರಯ್ಯ! ನೀವಿನಿತು ಲೇಸನೀಯಯ್ಯ, ಅಂಬೇ, ಅಂಬೇ, ಕೂಡಲಸಂಗಮದೇವ!
-
ಕೆಸರಲ್ಲಿ ಬಿದ್ದ ಪಶುವಿನಂತೆ ಅನು ದೆಸೆದೆಸೆಗೆ ಬಾಯ ಬಿಡುತಿದ್ದೇನಯ್ಯ ಅಯ್ಯಾ, ಆರೈವರಿಲ್ಲ-- "ಅಕಟಕಟಾ! ಪಶು" ವೆಂದೆನ್ನ ಕೂಡಲಸಂಗಮದೇವ ಕೊಂಬ ಹಿಡಿದೆತ್ತುವನ್ನಕ.
-
ಬಡಪಶು ಪಂಕದಲ್ಲಿ ಬಿದ್ದರೆ ಕಾಲ ಬಡಿವುದಲ್ಲದೆ, ಬೇರೆ ಗತಿಯುಂಟೆ ? ಶಿವ ಶಿವಾ! ಹೋದಹೆ, ಹೋದಹೆನಯ್ಯ! ನಿಮ್ಮ ಮನದೆತ್ತಲೆನ್ನ ತೆಗೆಯಯ್ಯ ಪಶುವಾನು, ಪಶುಪತಿ ನೀನು. ತುಡುಗುಣಿಯೆಂದೆನ್ನ ಹಿಡಿದು ಬಡಿಯದ ಮುನ್ನ. ಒಡೆಯ, ನಿಮ್ಮ ಬಯ್ಯದಂತೆ ಮಾಡು ಕೂಡಲಸಂಗಮದೇವ.
-
ಬಲೆಗೆ ಸಿಕ್ಕಿದ ಮೃಗದಂತೆ ನಾನಯ್ಯ. ಮರಿದಪ್ಪಿದ ಹುಲ್ಲೆಯಂತೆ ದೆಸೆದೆಸೆಗೆ ಬಾಯ ಬಿಡುತಿರುವೆನಯ್ಯ, ನಾನಾರ ಸಾರುವೆನಯ್ಯ. ತಾಯಾಗಿ ತಂದೆಯಾಗಿ ನೀನೇ, ಸಕಲ ಬಂಧುಬಳಗವು ನೀನೆ ಕೂಡಲಸಂಗಮದೇವ.
-
ಸಮುದ್ರದೊಳಗಣ ಸಿಂಪಿನಂತೆ ಬಾಯ ಬಿಡುತಿದ್ದೇನಯ್ಯ! ನೀವಲ್ಲದೆ ಮತ್ತಾರೂ ಎನ್ನನರಿವರಿಲ್ಲ ನೋಡಯ್ಯ! ಕೂಡಲಸಂಗಮದೇವ, ನೀನಲ್ಲದೊಳಕೊಂಬವರಿಲ್ಲವಯ್ಯ.
-
ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ ಎನ್ನ ವಶವೇ ಅಯ್ಯ ? ನೀನಿರಿಸಿದಲ್ಲಿ ಇರದೆ ಎನ್ನ ವಶವೇ ಅಯ್ಯ. ಅಕಟಕಟಾ ಎನ್ನವನೆನ್ನವನೆನ್ನಯ್ಯ ಕೂಡಲಸಂಗಮದೇವಯ್ಯ.
-
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ ಸಲಹುತ್ತ, "ಶಿವಶಿವಾ" ಎಂದೋದಿಸಯ್ಯ. ಭಕ್ತಿ ಎಂಬ ಪಂಜರದೊಳಗಿಕ್ಕಿ ಸಲಹು ಕೂಡಲಸಂಗಮದೇವ.
-
ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ, ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ. ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ. ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವ.
-
ಎನ್ನ ವಾಮ-ಕ್ಷೇಮ ನಿಮ್ಮದಯ್ಯ ಎನ್ನ ಹಾನಿ-ವೃದ್ಧಿ ನಿಮ್ಮದಯ್ಯ ಎನ್ನ ಮಾನಾಪಮಾನವು ನಿಮ್ಮದಯ್ಯ ಬಳ್ಳಿಗೆ ಕಾಯಿ ದಿಮ್ಮಿತ್ತೆ ? ಕೂಡಲಸಂಗಮದೇವ.
-
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ. ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯ ಕೂಡಲಸಂಗಮದೇವಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯ.
-
ನರ ಕೂರಂಬಿನಲೆಚ್ಚ; ಅವಂಗೊಲಿದೆಯಯ್ಯ ಅರಳಂಬಿನಲೆಚ್ಚ ಕಾಮನನುರಹಿದೆಯಯ್ಯ. ಇರುಳು ಹಗಲೆನ್ನದೆ ಪ್ರಾಣಘಾತವ ಮಾಡಿದ ಬೇಡನ ಕೈಲಾಸಕೊಯ್ದೆಯಯ್ಯ. ಎನ್ನನೇತಕೆ ಒಲ್ಲೆ ಕೂಡಲಸಂಗಮದೇವ ?
-
ನೀನೊಲಿದರೆ ಕೊರಡು ಕೊನರುವುದಯ್ಯ. ನೀನೊಲಿದರೆ ಬರಡು ಹಯನಹುದಯ್ಯ. ನೀನೊಲಿದರೆ ವಿಷವಮೃತವಹುದಯ್ಯ. ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು ಕೂಡಲಸಂಗಮದೇವ.
-
ಆಶೆಯೆಂಬ ಪಾಶದಲ್ಲಿ ಭವಬಂಧನವಾಗಿದ್ದೆನಯ್ಯ. ಸಕೃತೂ ನಿಮ್ಮ ನೆನೆಯಲೆನಗೆ ತೆರೆಹಿಲ್ಲವಯ್ಯ. ಕರುಣಾಕರ, ಅಭಯಕರ, ವರದಾನಿ ಕರುಣಿಸಯ್ಯ. ಸಂಸಾರಬಂಧವನು ಮಾಣಿಸಿ ಎನಗೆ ಕೃಪೆ ಮಾಡಿ ನಿಮ್ಮ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸಯ್ಯ ಭಕ್ತಜನಮನೋವಲ್ಲಭ ಕೂಡಲಸಂಗಮದೇವ.
-
ಅರಿದಹೆನೆಂದರೆ ಅರುಹಿಂಗಸಾಧ್ಯ! ನೆನೆದಹೆನೆಂದರೆ ನೆನೆಹಿಂಗಸಾಧ್ಯ! ಭಾವಿಸುವೆನೆಂದರೆ ಭಾವಕ್ಕಸಾಧ್ಯ! ವಾಙ್ಮಾನಸಕ್ಕಗೋಚರವನರಿವ ಪರಿಯೆಂತಯ್ಯ ಗುರು ತೋರದನ್ನಕ ? ಗುರು-ಶಿಷ್ಯರ ಸಂವಾದದಲ್ಲಿ ಸ್ವಯಂ ಜೋತಿರ್ಲಿಂಗ ಸಾವಯವಪ್ಪುದೆಂಬ ಶ್ರುತಿ ಹುಸಿಯೆ ?
-
ಜ್ಞಾನಾಮೃತವೆಂಬ ಜಲಧಿಯ ಮೇಲೆ ಸಂಸಾರವೆಂಬ ಹಾವಸೆ ಮುಸುಕಿಹುದು! ನೀರ ಮೊಗೆವವರು ಬಂದು ನೂಕಿದಲ್ಲದೆ ತೆರಳದು! ಮರಳಿ ಮರಳಿ ಮುಸುಕುವುದು ಮಾಣದಯ್ಯ! ಆಗಳೂ ಎನ್ನುವನು ನೆನೆವುತ್ತಿರಬೇಕೆಂದು- ಬೇಗ ಗುರು ಅಪ್ಪೈಸಿ ತನ್ನ ಪ್ರಸಾದವೆಂದು ಕುರುಹ ಕೊಟ್ಟನು. ದಿವಾರಾತ್ರಿ ಮಾಡ ಹೇಳಿದ ಲಿಂಗಪೂಜೆಯ, ತನ್ನನರಿಯಬೇಕೆಂದು. ಕೆರೆಯ ನೀರನುಂಡು ತೊರೆಯ ನೀರ ಹೊಗಳುವ ಅರೆಮರುಳುಗಳ ಮೆಚ್ಚ ನಮ್ಮ ಕೂಡಲಸಂಗಮದೇವ.
-
ಮಡಕೆಯ ಮಾಡುವಡೆ ಮಣ್ಣೇ ಮೊದಲು, ತೊಡಿಗೆಯ ಮಾಡುವಡೆ ಹೊನ್ನೇ ಮೊದಲು, ಶಿವಪಥವನರಿವಡೆ ಗುರುಪಾದವೇ ಮೊದಲು ಕೂಡಲಸಂಗಮದೇವನರಿವಡೆ ಶರಣರ ಸಂಗವೇ ಮೊದಲು.
-
ಕರಿಯಂಜುವುದು ಅಂಕುಶಕ್ಕಯ್ಯ! ಗಿರಿಯಂಜುವುದು ಕುಲಿಶಕ್ಕಯ್ಯ! ತಮಂಧವಂಜುವುದು ಜ್ಯೋತಿಗಯ್ಯ! ಕಾನನವಂಜುವುದು ಬೇಗೆಗಯ್ಯ! ಪಂಚಮಹಾಪಾತಕವಂಜುವುದು ನಮ್ಮ ಕೂಡಲಸಂಗನ ನಾಮಕ್ಕಯ್ಯ!
-
ನೀರಿಂಗೆ ನೈದಿಲೇ ಶೃಂಗಾರ, ಊರಿಂಗೆ ಆರವೆಯೇ ಶೃಂಗಾರ, ಸಮುದ್ರಕ್ಕೆ ತೆರೆಯೇ ಶೃಂಗಾರ ನಾರಿಗೆ ಗುಣವೇ ಶೃಂಗಾರ ಗಗನಕ್ಕೆ ಚಂದ್ರಮನೇ ಶೃಂಗಾರ ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ.
-
. ಅಕಟಕಟಾ ಬೆಡಗುಬಿನ್ನಾಣವೇನೋ ?! 'ಓಂ ನಮಶ್ಶಿವಾಯ' ಎಂಬುದೇ ಮಂತ್ರ! 'ಓಂ ನಮಶ್ಶಿವಾಯ' ಎಂಬುದೇ ತಂತ್ರ! ನಮ್ಮ ಕೂಡಲಸಂಗಮದೇವರ ಮಾಣದೆ ನೆನವುದೇ ಮಂತ್ರ!
-
ಎಮ್ಮವರು ಬೆಸಗೊಂಡರೆ ಶುಭಲಗ್ನವೆಂದೆನ್ನಿರಯ್ಯ ರಾಶಿ ಕೂಟ ಋಣ ಸಂಬಂಧ ಉಂಟೆಂದು ಹೇಳಿರಯ್ಯ ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯ ಚಂದ್ರಬಲ ತಾರಾಬಲ ಉಂಟೆಂದು ಹೇಳಿರಯ್ಯ ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯ.
-
ತಾಳಮರದ ಕೆಳಗೆ ಒಂದು ಹಾಲ ಹರವಿಯಿದ್ದರೆ ಅದ ಹಾಲ ಹರವಿಯೆನ್ನರು: ಸುರೆಯ ಹರವಿಯೆಂಬರು. ಈ ಭಾವಸಂದೆಯವ ಮಾಣಿಸಾ ಕೂಡಲಸಂಗಮದೇವ.
-
ಕುಂಬಳ ಕಾಯಿಗೆ ಕಬ್ಬುನದ ಕಟ್ಟ ಕೊಟ್ಟರೆ ಕೊಳೆವುದಲ್ಲದೆ ಅದು ಬಲುಹಾಗ ಬಲ್ಲುದೆ ? ಅಳಿಮನದವಂಗೆ ದೀಕ್ಷೆಯ ಕೊಟ್ಟರೆ ಭಕ್ತಿಯೆಂತಹುದು ? ಮುನ್ನಿನಂತೆ, ಕೂಡಲಸಂಗಯ್ಯ! ಮನಹೀನನ ಮೀಸಲ ಕಾಯ್ದಿರಿಸಿದಂತೆ!!
-
ಸಗಣಿಯ ಬೆನಕನ ಮಾಡಿ ಸಂಪಿಗೆಯರಳಲ್ಲಿ ಪೂಜಿಸಿದರೆ ರಂಜನೆಯಹುದಲ್ಲದೆ, ಅದರ ಗಂಜಳ ಬಿಡದಣ್ಣ! ಮಣ್ಣ ಪ್ರತಿಮೆಯ ಮಾಡಿ ಮಜ್ಜನಕ್ಕೆರೆದರೆ ನಿಚ್ಚ ಕೆಸರಹುದಲ್ಲದೆ ಅದರಚ್ಚಿಗ ಬಿಡದಣ್ಣ!! ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟರೆ ಆ ಕೆಟ್ಟವನೇಕೆ ಸದ್ಭಕ್ತನಹನು ಕೂಡಲಸಂಗಮದೇವಾ ?
-
ಕಬ್ಬುನದ ಕೋಡಗ ಪರುಷ ಮುಟ್ಟಿ ಹೊನ್ನಾದರೇನು ಅದು ತನ್ನ ಮುನ್ನಿನ ರೂಹ ಬಿಡದನ್ನಕ ? ಕೂಡಲಸಂಗಮದೇವಾ, ನಿಮ್ಮ ನಂಬಿಯೂ, ನಂಬದ ಡಂಬಕ ನಾನಯ್ಯ.
-
ಒಳಗೆ ಕುಟಿಲ, ಹೊರಗೆ ವಿನಯವಾಗಿ ಭಕ್ತರೆನಿಸಿಕೊಂಬವರನೊಲ್ಲನಯ್ಯಾ ಲಿಂಗವು! ಅವರು ಸತ್ಪಥಕ್ಕೆ ಸಲ್ಲರು ಸಲ್ಲರಯ್ಯ! ಒಳಹೊರಗೊಂದಾಗದವರಿಗೆ ಅಳಿಯಾಸೆದೋರಿ ಬೀಸಾಡುವನವರ ಜಗದೀಶ ಕೂಡಲಸಂಗಮದೇವ.
-
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ ? ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲ! ತನುವಿನಲಿ ಹುಸಿ ತುಂಬಿ, ಮನದಲ್ಲಿ ವಿಷಯ ತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲ! ಕೂಡಲಸಂಗಮದೇವ.
-
ಹಲವು ಕಾಲ ಹಂಸೆಯ ಸಂಗದಲಿದ್ದರೇನು ಬಕ ಶುಚಿಯಾಗಬಲ್ಲುದೇ ? ಗಂಗಾನದಿಯಲ್ಲಿದ್ದರೇನು ಪಾಷಾಣ ಮೃದುವಾಗಬಲ್ಲುದೇ ? ಕಲ್ಪತರುವಿನ ಸನ್ನಿಧಿಯಲ್ಲಿದ್ದರೇನು ಒಣ ಕೊರಡು ಕೊನರಿ ಫಲವಾಗಬಲ್ಲುದೇ ? ಕಾಶೀಕ್ಷೇತ್ರದಲ್ಲಿ ಒಂದು ಶುನಕನಿದ್ದರೇನು ? ಅದರ ಹಾಲು ಪಂಚಾಮೃತಕ್ಕೆ ಸಲುವುದೇ ? ತೀರ್ಥದಲೊಂದು ಗಾರ್ದಭನಿದ್ದರೇನು ಕಾರಣಿಕನಾಗಬಲ್ಲುದೇ ? ಖಂಡುಗ ಹಾಲೊಳಗೊಂದು ಇದ್ದಲಿಯಿದ್ದರೇನು ? ಅದು ಬಿಳುಹಾಗಬಲ್ಲುದೆ ? ಇದು ಕಾರಣ-ಕೂಡಲಸಂಗನ ಶರಣರ ಸನ್ನಿಧಿಯಲ್ಲಿ ಅಸಜ್ಜನನಿದ್ದರೇನು ಸದ್ಭಕ್ತನಾಗಬಲ್ಲನೇ ?
-
ಓಡೆತ್ತ ಬಲ್ಲುದೋ ಅವಲಕ್ಕಿಯ ಸವಿಯ ? ಕೋಡಗ ಬಲ್ಲುದೇ ಸೆಳೆಮಂಚದ ಸುಖವ ? ಕಾಗೆ ನಂದನವನದೊಳಗಿದ್ದರೇನು, ಕೋಗಿಲೆಯಾಗಬಲ್ಲುದೇ ? ಕೊಳನ ತಡಿಯಲೊಂದು ಹೊರಸು ಕುಳಿತಿದ್ದರೇನು ಕಳಹಂಸೆಯಾಗಬಲ್ಲುದೇ ಕೂಡಲಸಂಗಮದೇವ ?
-
ಎನಿಸು ಕಾಲ ಕಲ್ಲು ನೀರೊಳಗಿದ್ದರೇನು, ನೆನೆದು ಮೃದುವಾಗಬಲ್ಲುದೆ ? ಎನಿಸುಕಾಲ ನಿಮ್ಮ ಪೂಜಿಸಿ ಏವೆನಯ್ಯಾ ಮನದಲ್ಲಿ ದೃಢವಿಲ್ಲದನ್ನಕ ? ನಿಧಾನವ ಕಾಯ್ದಿದ್ದ ಬೆಂತರನ ವಿಧಿ ಎನಗಾಯಿತ್ತು ಕಾಣಾ ಕೂಡಲಸಂಗಮದೇವ.
-
ಕೂಸುಳ್ಳ ಸೂಳೆ ಧನದಾಸೆಗೊತ್ತೆಗೊಂಡರೆ ಕೂಸಿಂಗಿಲ್ಲ, ಬೊಜಗಂಗಿಲ್ಲ; ಕೂಸನೊಮ್ಮೆ ಸಂತವಿಡುವಳು, ಬೊಜಗನನೊಮ್ಮೆ ನೆರೆವಳು; ಧನದಾಸೆ ಬಿಡದು ಕೂಡಲಸಂಗಮದೇವ.
-
ಎರದೆಲೆಯಂತೆ ಒಳಗೊಂದು ಹೊರಗೊಂದಾದರೆ ಮೆಚ್ಚುವನೆ ? ತಾನು ತನ್ನಂತೆ! ನುಡಿ ಎರಡಾದರೆ ಮೆಚ್ಚುವನೆ ? ತಾನು ತನ್ನಂತೆ! ನಡೆ ಎರಡಾದರೆ ಮೆಚ್ಚುವನೆ ? ತಾನು ತನ್ನಂತೆ! ಉಡುವಿನ ನಾಲಗೆಯಂತೆ ಎರಡಾದರೆ ಮೆಚ್ಚುವನೇ ? ಕೂಡಲಸಂಗಮದೇವ ತಾನು ತನ್ನಂತೆ!
-
ಭಕ್ತರ ಕಂಡರೆ ಬೋಳಪ್ಪಿರಯ್ಯ; ಸವಣರ ಕಂಡರೆ ಬತ್ತಲೆಯಪ್ಪಿರಯ್ಯ ಹಾರುವರ ಕಂಡರೆ ಹರಿನಾಮವೆಂಬಿರಯ್ಯ; ಅವರವರ ಕಂಡರೆ ಅವರವರಂತೆ ಸೂಳೆಗೆ ಹುಟ್ಟಿದವರ ತೋರದಿರಯ್ಯ. ಕೂಡಲಸಂಗಯ್ಯನ ಪೂಜಿಸಿ ಅನ್ಯದೈವಂಗಳಿಗೆರಗಿ ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯ!
-
ಗಂಡ ಶಿವಲಿಂಗದೇವರ ಭಕ್ತ, ಹೆಂಡತಿ ಮಾರಿಮಸಣಿಯ ಭಕ್ತೆ; ಗಂಡ ಕೊಂಬುದು ಪಾದೋದಕಪ್ರಸಾದ, ಹೆಂಡತಿ ಕೊಂಬುದು ಸುರೆಮಾಂಸ. ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ ಹೆಂಡದ ಮಡಕೆಯ ಹೊರಗೆ ತೊಳೆದಂತೆ ಕೂಡಲಸಂಗಮದೇವ.
-
ಹಾವಾಡಿಗನು, ಮೂಕೊರತಿಯು ತನ್ನ ಮಗನ ಮದುವೆಗೆ ಶಕುನವ ನೋಡ ಹೋಗುವಾಗ, ಇದಿರಲೊಬ್ಬ ಮೂಕೊರತಿಯ ಹಾವಾಡಿಗನ ಕಂಡು ಶಕುನ ಹೊಲ್ಲವೆಂಬ ಚದುರನ ನೋಡಾ! ತನ್ನ ಸತಿ ಮೂಕೊರತಿ, ತನ್ನ ಕೈಯಲು ಹಾವು! ತಾನು ತನ್ನ ಭಿನ್ನವನರಿಯದೆ ಅನ್ಯರನೆಂಬ ಕುನ್ನಿಯನೇನೆಂಬೆ ಕೂಡಲಸಂಗಮದೇವ!
-
ಅರ್ಥರೇಖೆಯಿದ್ದಲ್ಲಿ ಫಲವೇನು ಆಯುಷ್ಯರೇಖೆಯಿಲ್ಲದನ್ನಕ ? ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದು ಫಲವೇನು ? ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವೇನು ? ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು ? ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ ಲಿಂಗವಿದ್ದು ಫಲವೇನು ಶಿವಪಥವನರಿಯದನ್ನಕ ?
-
ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ, ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ, ಇದ್ದರೇನೋ, ಶಿವಶಿವಾ, ಹೋದರೇನೋ! ಕೂಡಲ ಸಂಗಮ ದೇವ, ಕೇಳಯ್ಯ, ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ!
-
ಹಾದರಕ್ಕೆ ಹೋದರೆ ಕಳ್ಳದಮ್ಮವಾಯಿತ್ತು! ಹಾಳುಗೋಡೆಗೆ ಹೋದರೆ ಚೇಳೂರಿತ್ತು! ಅಬ್ಬರವ ಕೇಳಿ ತಳವಾರನುಟ್ಟ ಸೀರೆಯ ಸುಲಿದ! ನಾಚಿ ಹೋದರೆ, ಮನೆಯ ಗಂಡ ಬೆನ್ನ ಬಾರನೆತ್ತಿದ! ಅರಸು ಕೂಡಲಸಂಗಮದೇವ ದಂಡವ ಕೊಂಡ!
-
ಅಳೆಯುತ್ತ ಅಳೆಯುತ್ತ ಬಳಲುವರಲ್ಲದೆ ಕೊಳಗ ಬಳಲುವುದೇ ? ನಡೆಯುತ್ತ ನಡೆಯುತ್ತ ಬಳಲುವರಲ್ಲದೆ, ಬಟ್ಟೆ ಬಳಲುವುದೆ ? ಶ್ರವವ ಮಾಡುತ್ತ ಮಾಡುತ್ತ ಬಳಲುವರಲ್ಲದೆ ಕೋಲು ಬಳಲುವುದೆ ? ನಿಜವನರಿಯದ ಭಕ್ತ ಬಳಲುವನಲ್ಲದೆ, ಲಿಂಗ ಬಳಲುವುದೆ ? ಕೂಡಲಸಂಗಮದೇವ, ಅರಸರಿಯದ ಬಿಟ್ಟಿಯೋಪಾದಿ!
-
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ ಹರದ ಕುಳ್ಳಿರ್ದ ನಮ್ಮ ಮಹದೇವಸೆಟ್ಟಿ. ಒಮ್ಮನವಾದರೆ ಒಡನೆ ನುಡಿವನು; ಇಮ್ಮನವಾದರೆ ನುಡಿಯನು. ಕಾಣಿಯ ಸೋಲ; ಅರ್ಧ ಕಾಣಿಯ ಗೆಲ್ಲ. ಜಾಣ ನೋಡವ್ವ ನಮ್ಮ ಕೂಡಲಸಂಗಮದೇವ.
-
ನಂಬರು, ನಚ್ಚರು; ಬರಿದೆ ಕರೆವರು; ನಂಬಲರಿಯರೀ ಲೋಕದ ಮನುಜರು! ನಂಬಿ ಕರೆದಡೆ, "ಓ" ಎನ್ನನೇ ಶಿವನು ? ನಂಬದೆ, ನಚ್ಚದೆ ಬರಿದೆ ಕರೆವರ ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ.
-
ಹುತ್ತವ ಬಡಿದರೆ ಉರಗ ಸಾವುದೆ ಘೋರತಪವ ಮಾಡಿದರೇನು ಅಂತರಂಗ-ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯ ಕೂಡಲಸಂಗಮದೇವ ?
-
ಮೇರು ಗುಣವನರಸುವುದೇ ಕಾಗೆಯಲ್ಲಿ ? ಪರುಷ ಗುಣವನರಸುವುದೇ ಕಬ್ಬುನದಲ್ಲಿ ? ಸಾಧು ಗುಣವನರಸುವನೇ ಅವಗುಣಿಯಲ್ಲಿ ? ಚಂದನ ಗುಣವನರಸುವುದೇ ತರುಗಳಲ್ಲಿ ? ಸರ್ವಗುಣಸಂಪನ್ನ ಲಿಂಗವೇ, ನೀನೆನ್ನಲ್ಲಿ ಅವಗುಣವನರಸುವುದೇ, ಕೂಡಲಸಂಗಮದೇವ!
-
ಸಾರ, ಸಜ್ಜನರ ಸಂಗವ ಮಾಡುವುದು! ದೂರ, ದುರ್ಜನರ ಸಂಗ ಬೇಡವಯ್ಯ! ಆವ ಹಾವಾದರೇನು ? ವಿಷವೊಂದೆ! ಅಂಥವರ ಸಂಗ ನಮಗೆ ಬೇಡವಯ್ಯ. ಅಂತರಂಗಶುದ್ಧವಿಲ್ಲದವರ ಸಂಗ ಸಿಂಗಿ ಕಾಳಕೂಟ ವಿಷವೋ ಕೂಡಲಸಂಗಯ್ಯ.
-
ಹಸಿದು ಎಕ್ಕೆಯ ಕಾಯ ಮೆಲಬಹುದೆ ? ನೀರಡಸಿ ವಿಷವನೀಂಟಬಹುದೆ ? ಸುಣ್ಣದ, ತುಯ್ಯಲ ಬಣ್ಣವೊಂದೆ ಎಂದರೆ ನಂಟುತನಕ್ಕೆ ಉಣ್ಣಬಹುದೆ ? ಲಿಂಗಸಾರಾಯ ಸಜ್ಜನರಲ್ಲದವರ ಕೂಡಲಸಂಗಮ ದೇವರೆಂತೊಲಿವ!
-
ಎಲವದ ಮರ ಹೂತು ಫಲವಾದ ತೆರನಂತೆ ಸಿರಿಯಾದರೇನು ಶಿವಭಕ್ತಿಯಿಲ್ಲದನ್ನಕ ? ಫಲವಾದರೇನು, ಹೇಳಾ, ಹಾವುಮೆಕ್ಕೆಯ ಕಾಯಿ ? ಕುಲವಿಲ್ಲದ ರೂಹು ಎಲ್ಲಿದ್ದರೇನು ? ಬಚ್ಚಲ ನೀರು ತಿಳಿದಲ್ಲಿ ಫಲವೇನು ? ಅವಗುಣಿಗಳ ಮೆಚ್ಚ ಕೂಡಲಸಂಗಮದೇವ.
-
ಗಿಳಿಯೋದಿ ಫಲವೇನು ಬೆಕ್ಕು ಬಹುದ ಹೇಳಲರಿಯದು! ಜಗವೆಲ್ಲವ ಕಾಂಬ ಕಣ್ಣು ತನ್ನ ಕೊಂಬ ಕೊಯಿಲೆಯ ಕಾಣಲರಿಯದು! ಇದಿರ ಗುಣವ ಬಲ್ಲೆವೆಂಬರು ತಮ್ಮ ಗುಣವ ತಾವರಿಯರು ಕೂಡಲಸಂಗಮದೇವ.
-
ಲೋಕದ ಡೊಂಕ ನೀವೇಕೆ ತಿದ್ದುವಿರಿ ? ನಿಮ್ಮ ನಿಮ್ಮ ತನವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವರ ಮೆಚ್ಚ ನಮ್ಮ ಕೂಡಲಸಂಗಮದೇವ.
-
ಏತ ತಲೆವಾಗಿದರೇನು ? ಗುರುಭಕ್ತನಾಗಬಲ್ಲುದೆ ? ಇಕ್ಕುಳ ಕೈ ಮುಗಿದರೇನು ? ಭೃತ್ಯಾಚಾರಿಯಾಗಬಲ್ಲುದೆ ? ಗಿಳಿಯೋದಿದರೇನು ? ಲಿಂಗವೇದಿಯಾಗಬಲ್ಲುದೆ ? ಕೂಡಲಸಂಗನ ಶರಣರು ಬಂದ ಬರವ, ನಿಂದ ನಿಲವ ಅನಂಗಸಂಗಿಗಳೆತ್ತ ಬಲ್ಲರು ?
-
ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ; ಆ ಪೂಜೆಯು, ಆ ಮಾಟವು ಚಿತ್ರದ ರೂಹು ಕಾಣಿರಣ್ಣ! ಚಿತ್ರದ ಕಬ್ಬು ಕಾಣಿರಣ್ಣ! ಅಪ್ಪಿದರೆ ಸುಖವಿಲ್ಲ, ಮೆಲಿದರೆ ಸವಿಯಿಲ್ಲ; ಕೂಡಲಸಂಗಮದೇವ, ನಿಜವಿಲ್ಲದವನ ಭಕ್ತಿಯಿಂತುಟು!
-
ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು! ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ ಹೋಯಿತ್ತು! ಅದಂದೆ ಹುಟ್ಟಿತು, ಅದಂದೆ ಹೊಂದಿತ್ತು. ಕೊಂದವರುಳಿದರೆ ಕೂಡಲಸಂಗಮದೇವ ?
-
ಹಾವಿನ ಬಾಯಿ ಕಪ್ಪೆ ಹಸಿದು ತಾ ಹಾರುವ ನೊಣಕಾಸೆ ಮಾಡುವಂತೆ, ಶೂಲವನೇರುವ ಕಳ್ಳ ಹಾಲು ತುಪ್ಪವ ಕುಡಿದು ಮೇಲಿನ್ನೇಸು ಕಾಲ ಬದುಕುವನೋ ?! ಕೆಡುವೊಡಲ ನೆಚ್ಚಿ, ಕಡುಹುಸಿಯನೆ ಹುಸಿದು ಒಡಲ ಹೊರೆವವರ ಮೆಚ್ಚ ನಮ್ಮ ಕೂಡಲಸಂಗಮದೇವ.
-
ಅರತವಡಗದು. ಕ್ರೋಧ ತೊಲಗದು; ಕ್ರೂರಕುಭಾಷೆ ಕುಹುಕ ಬಿಡದನ್ನಕ ನೀನೆತ್ತಲು ? ಶಿವನೆತ್ತಲು ? ಹೋಗತ್ತ ಮರುಳೆ! ಭವರೋಗವೆಂಬ ತಿಮಿರ ತಿಳಿಯದನ್ನಕ ಕೂಡಲಸಂಗಯ್ಯನೆತ್ತ ? ನೀನೆತ್ತ ? ಮರುಳೇ!
-
ಹಾವು ತಿಂದವರ ನುಡಿಸ ಬಹುದು! ಗರ ಹೊಡೆದವರ ನುಡಿಸ ಬಹುದು! ಸಿರಿಗರ ಹೊಡೆದವರ ನುಡಿಸ ಬಾರದು ನೋಡಯ್ಯ! ಬಡತನವೆಂಬ ಮಂತ್ರವಾದಿ ಹೋಗಲು ಒಡನೆ ನುಡಿವರಯ್ಯ ಕೂಡಲಸಂಗಮದೇವ.
-
ಅರೆಭಕ್ತರಾದವರ ನೆರೆ ಬೇಡ, ಹೊರೆ ಬೇಡ. ದಾರಿಸಂಗಡ ಬೇಡ, ದೂರ ನುಡಿಯಲು ಬೇಡ. ಕೂಡಲಸಂಗನ ಶರಣರಲ್ಲಿ ಅಚ್ಚಲಿಂಗೈಕ್ಯಂಗೆ ತೊತ್ತಾಗಿಹುದು ಕರಲೇಸಯ್ಯ.
-
ದೂಷಕನಾವನೊಬ್ಬ ದೇಶವ ಕೊಟ್ಟರೆ, ಆಸೆಮಾಡಿ ಅವನ ಹೊರೆಯಲಿರಬೇಡ. ಮಾದಾರ ಶಿವಭಕ್ತನಾದರೆ ಆತನ ಹೊರೆಯಲು ಇಪ್ಪುದು ಕರಲೇಸಯ್ಯ! ಭೃತ್ಯನಾಗಿ, ತೊತ್ತಾಗಿಪ್ಪುದು ಕರಲೇಸಯ್ಯ! ಕಾಡುಸೊಪ್ಪ ತಂದು ಓಡಿನಲ್ಲಿ ಹುರಿದಿಟ್ಟುಕೊಂಡು ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗನ ಶರಣರ.
-
ಸಾರ ಸಜ್ಜನರ ಸಂಗವೇ ಲೇಸು ಕಂಡಯ್ಯ! ದೂರ ದುರ್ಜನರ ಸಂಗವದು ಭಂಗವಯ್ಯ! ಸಂಗವೆರಡುಂಟು-ಒಂದ ಬಿಡು, ಒಂದ ಹಿಡಿ ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣ.
-
ಪಟ್ಟವ ಕಟ್ಟಿದ ಬಳಿಕ ಲಕ್ಷಣವನರಸುವರೆ ? ಲಿಂಗದೇವನ ಪೂಜಿಸಿ ಕುಲವನರಸುವರೆ, ಅಯ್ಯಾ, ಕೂಡಲಸಂಗಮದೇವ "ಭಕ್ತಕಾಯ ಮಮಕಾಯ" ವೆಂದನಾಗಿ ?
-
ಪರಷ ಮುಟ್ಟಿದ ಬಳಿಕ ಕಬ್ಬುನವಾಗದು ನೋಡಾ! ಲಿಂಗ(ವ) ಮುಟ್ಟಿದ ಬಳಿಕ ಕುಚಿತ್ತಾಚಾರವಾಗದು ನೋಡಾ ಕೂಡಲಸಂಗನ ಶರಣರು ಅನ್ಯವನರಿಯರಾಗಿ.
-
ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ ? ಇಹಲೋಕದೊಳಗೇ ಮತ್ತನಂತಲೋಕ! ಶಿವಲೋಕ ಶಿವಾಚಾರವಯ್ಯ, ಶಿವಭಕ್ತನಿದ್ದ ಠಾವೇ ದೇವಲೋಕ, ಭಕ್ತನಂಗಳವೇ ವಾರಣಾಸಿ, ಶಿವಭಕ್ತನ ಕಾಯವೇ ಕೈಲಾಸ, ಇದು ಸತ್ಯ ಕೂಡಲಸಂಗಮದೇವ.
-
ಕಟ್ಟಿದಿರಲ್ಲಿ ಶಿವಭಕ್ತನ ಕಂಡು, ದೃಷ್ಟಿಯಾರೆ ಮನಮುಟ್ಟಿ ನೋಡಿ ಶರಣೆಂದರೆ ಹುಟ್ಟೇಳು ಜನ್ಮದ ಪಾಪ ಬಿಟ್ಟು ಹೋಹವು ನೋಡಾ! ಮುಟ್ಟಿ ಚರಣಕ್ಕೆರಗಿದರೆ, ತನು ಒಪ್ಪಿದಂತಿಹುದು ಪರುಷ ಮುಟ್ಟಿದಂತೆ. ಕರ್ತೃ ಕೂಡಲಸಂಗನ ಶರಣರ ಸಂಗವು! ಮತ್ತೆ ಭವಮಾಲೆಯ ಹೊದ್ದಲೀಯದು ನೋಡಾ!
-
ಆರಾರ ಸಂಗವೇನೇನ ಮಾಡದಯ್ಯ! ಕೀಡೆ ಕುಂಡಲಿಗನಾಗದೇನಯ್ಯ ? ಚಂದನದ ಸನ್ನಿಧಿಯಲ್ಲಿ, ಪರಿಮಳ ತಾಗಿ ಬೇವು-ಬೊಬ್ಬುಲಿ-ತರಿಯ ಗಂಧಂಗಳಾಗವೆ ? ನಮ್ಮ ಕೂಡಲಸಂಗನ ಶರಣರ ಸನ್ನಿಧಿಯಲ್ಲಿದ್ದು ಕರ್ಮ ನಿರ್ಮಳವಾಗದಿಹುದೇ ?
-
ಹಾವಿನ ಡೊಂಕು ಹುತ್ತಕ್ಕೆ ಸಸಿನ. ನದಿಯ ಡೊಂಕು ಸಮುದ್ರಕ್ಕೆ ಸಸಿನ. ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ.
-
ಆಳಿಗೊಂಡಿಹರೆಂದು ಅಂಜಲದೇಕೆ ? ನಾಸ್ತಿಕವಾಡಿಹರೆಂದು ನಾಚಲದೇಕೆ ? ಆರಾದಡಾಗಲಿ ಶ್ರೀ ಮಹಾದೇವಂಗೆ ಶರಣೆನ್ನಿ. ಏನೂ ಅರಿಯೆನೆಂದು ಮೋನಗೊಂಡಿರಬೇಡ ಕೂಡಲಸಂಗಮದೇವರ ಮುಂದೆ ದಂ-ದಣ-ದತ್ತಣಯೆನ್ನಿ.
-
ಹಮ್ಮಿನ ಭಕ್ತಿ ಕರ್ಮಕ್ಕೆ ಮೊದಲು! ಮರ್ಮವರಿಯದ ಮಾಟ ಸಯಿದಾನದ ಕೇಡು! ಬಂದ ಸಮಯೋಚಿತವನರಿಯದಿದ್ದರೆ ನಿಂದಿರಲೊಲ್ಲ ಕೂಡಲಸಂಗಮದೇವ.
-
ಬಲ್ಲಿದರೊಡನೆ ಬವರವಾದರೆ ಗೆಲಲುಂಟು ಸೋಲಲುಂಟು- ಕಳನೊಳಗೆ ಭಾಷೆ ಪೂರಾಯವಯ್ಯ! ನಮ್ಮ ಕೂಡಲಸಂಗನ ಶರಣರಿಗೆ ಮಾಡಿ ಮಾಡಿ, ಧನ ಸವೆದು ಬಡವಾದರೆ ಆ ಭಕ್ತನು ಲಿಂಗಕ್ಕೆ ಪೂಜೆಯಹನು.
-
ಗೀತವ ಬಲ್ಲಾತ ಜಾಣನಲ್ಲ. ಮಾತ ಬಲ್ಲಾತ ಜಾಣನಲ್ಲ. ಜಾಣನು ಜಾಣನು, ಆತ ಜಾಣನು; ಲಿಂಗವ ನೆರೆ ನಂಬಿದಾತ ಆತ ಜಾಣನು! ಜಂಗಮಕ್ಕೆ ಸವೆಸುವಾತ ಆತ ಜಾಣನು! ಜವನ ಬಾಯಲು ಬಾಲವ ಕೊಯ್ದು ಹೋದಾತ ಆತ ಜಾಣನು ನಮ್ಮ ಕೂಡಲಸಂಗನ ಶರಣನು!
-
ಹಾವು-ಹದ್ದು-ಕಾಗೆ-ಗೂಗೆ ಅನಂತ ಕಾಲ ಬದುಕವೆ ? ಬೇಡವೋ ಮಾನವ, ಲೇಸೆನಿಸಿಕೊಂಡು ಬದುಕುವೋ, ಮಾನವ, ಶಿವಭಕ್ತನಾಗಿ! "ಜೀವಿತಂ ಶಿವಭಕ್ತಾನಾಂ ವರಂ ಪಂಚ ದಿನಾನಿ ಚ ಅಜಕಲ್ಪ ಸಹಸ್ರಂ ತು ಭಕ್ತಿಹೀನಂ ನ ಶಾಂಕರಿ" ಎಂದುದಾಗಿ ನಮ್ಮ ಕೂಡಲಸಂಗಮದೇವರ ಭಕ್ತಿವಿಡಿದು ಐದು ದಿನವಾದರೂ ಬದುಕಿದರೆ ಸಾಲದೆ ?!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ